ರಾಮಶರ್ಮ, ತರ್ಕವಾಗೀಶ
 ಸು. 17ನೆಯ ಶತಮಾನ. ಪ್ರಾಕೃತ ಕಲ್ಪತರು ಎಂಬ ವ್ಯಾಕರಣ ಗ್ರಂಥದ ಕರ್ತೃ. ಪುರುಷೋತ್ತಮನ `ಪ್ರಾಕೃತಾನುಶಾಸನದ ಪ್ರಕಾರ ಈತ ತನ್ನ ಗ್ರಂಥದ ವಿವೇಚನೆಯನ್ನು ಮಾಡಿದ್ದಾನೆಂದು ತಿಳಿದುಬರುತ್ತದೆ.

ಪ್ರಾಕೃತ ಕಲ್ಪತರು ಸ್ವೋಪಜ್ಞ ಟೀಕೆಯನ್ನೊಳಗೊಂಡ ಗ್ರಂಥ. ಇದರಲ್ಲಿ ಮೂರು ವಿಭಾಗಗಳಿವೆ. ಪ್ರಥಮ ವಿಭಾಗದಲ್ಲಿ ಹತ್ತು ಸ್ತವಕಗಳಿವೆ. ಇವುಗಳಲ್ಲಿ ಮಹಾರಾಷ್ಟ್ರೀ ಪ್ರಾಕೃತದ ನಿಯಮಗಳ ಪ್ರತಿಪಾದನೆಯಿದೆ. ಎರಡನೆಯ ವಿಭಾಗದಲ್ಲಿ ಮೂರು ಸ್ತವಕಗಳಿದ್ದು ಇವುಗಳಲ್ಲಿ ಶೌರಸೇನಿ, ಪ್ರಾಚ್ಯ, ಆವಸ್ತಿ, ಬಾಹ್ಲೀಕಿ, ಮಾಗಧಿ, ಅರ್ಧಮಾಗಧಿ ಮತ್ತು ದಕ್ಷಿಣಾತ್ಯಗಳ ವಿವೇಚನೆಯನ್ನು ಮಾಡಲಾಗಿದೆ. ಈ ಭಾಷಾಪ್ರಭೇದಗಳ ಬಗೆಗೆ ದೊರೆಯುವ ವಿವರಗಳು ಹೀಗಿವೆ : ವಿದೂಷಕಾದಿಗಳಿಂದ ಪ್ರಾಚ್ಯವನ್ನು ಬಳಸಲಾಗುತ್ತದೆ. ಆವಸ್ತಿ ಭಾಷೆಯು ಶೌರಸೇನಿ ಮತ್ತು ಪ್ರಾಚ್ಯಗಳ ಸಮ್ಮಿಶ್ರಣದಿಂದ ರೂಪುಗೊಂಡಿದೆ. ನಗರಾಧಿಪ, ದ್ವಾರಪಾಲಕ; ದೂತ, ಮಧ್ಯಮ ಪಾತ್ರ, ವ್ಯಾಪಾರಿ-ಮೊದಲಾದವರಿಂದ ಆವಸ್ತಿ ಮತ್ತು ಬಾಹ್ಲೀಕಿ ಭಾಷೆಗಳು ಪ್ರಯೋಗವಾಗುತ್ತವೆ. ಭಿಕ್ಷು ಮತ್ತು ಕ್ಷಪಣಕಾದಿಗಳಿಂದ ಮಾಗಧಿಯ ಪ್ರಯೋಗವಾಗುತ್ತದೆ. ಮಾಗಧಿ ಭಾಷೆಗೆ ಮಹಾರಾಷ್ಟ್ರೀ ಮತ್ತು ಶೌರಸೇನಿ ಭಾಷೆಗಳು ಆಧಾರವಾಗಿವೆ. ದಕ್ಷಿಣಾತ್ಯ ಪ್ರಭೇದವು ಸಂಸ್ಕøತಾದಿ ಭಾಷೆಗಳಿಂದ ಕೂಡಿ, ಅದರ ಕಾವ್ಯವು ಅಮೃತಕ್ಕಿಂತಲೂ ಹೆಚ್ಚು ಸರಸವಾಗಿರುತ್ತದೆ. ಉಪಭಾಷೆಗಳಲ್ಲಿ ಶಾಕಾರಿಕಾ, ಚಾಂಡಾಲಿಕಾ, ಶಾಬರಿ, ಆಭೀರಕ ಮತ್ತು ಟಕ್ಕಿಗಳ ವಿವೇಚನೆ ಬರುತ್ತದೆ. ಇವುಗಳ ಬಗೆಗೆ ದೊರೆಯುವ ವಿವರಗಳು ಹೀಗಿವೆ : ರಾಜನ ಸ್ನೇಹಿತನೂ ಮದೋನ್ನತನೂ ಚಪಲಚಿತ್ತನೂ ಆಗಿರುವವನೇ ಶಕಾರ. ಆತನಾಡುವ ಭಾಷೆ `ಶಾಕಾರಿ. ಶೌರಸೇನಿ ಮತ್ತು ಮಾಗಧಿಯ ಮಿಶ್ರಣದಿಂದ ಚಾಂಡಾಲಿ ರೂಪುಗೊಳ್ಳುತ್ತದೆ. ಇದರಲ್ಲಿ ಗ್ರಾಮ್ಯೋಕ್ತಿಗಳ ಪ್ರಯೋಗ ಹೆಚ್ಚಾಗಿರುತ್ತದೆ. ಶಾಬರಿಯು ಮಾಗಧಿಯಿಂದ ರೂಪುಗೊಳ್ಳುತ್ತದೆ. ವ್ಯಾಧರು, ನಾವಿಕರು, ಸೌಧೆ ಮಾರುವವರು, ಇದ್ದಿಲು ಸುಡುವವರು ಈ ಭಾಷೆ ಮಾತನಾಡುವರು. ಅಭೀರಕವು ಶಾಬರಿಯಿಂದ ಸಿದ್ಧವಾಗುತ್ತದೆ. ಟಕ್ಕಿ ಭಾಷೆ ಜೂಜುಗಾರರು ಮತ್ತು ಧೂರ್ತರು ಆಡುವ ಭಾಷೆ, ಶಾಕಾರಿ, ಚೌಂಡಿ ಮತ್ತು ದ್ರಾವಿಡ ಭಾಷೆಗಳು ಅಪಭ್ರಂಶ ಭಾಷೆಯೊಳಗೇ ಸೇರಿದರೂ ನಾಟಕಾದಿಗಳಲ್ಲಿ ಇವುಗಳ ಪ್ರತ್ಯೇಕ ಪ್ರಯೋಗವಾಗುತ್ತದೆ. ಮೂರನೆಯ ವಿಭಾಗದಲ್ಲಿ ನಾಗರ, ಅಪಭ್ರಂಶ, ದ್ರಾವಿಡ ಹಾಗೂ ಪೈಶಾಚಿ ಭಾಷೆಗಳ ವಿವೇಚನೆ ಇವೆ.
(ಎಸ್.ವಿಐಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ